ವಿರೂಪಾಕ್ಷ ಪಂಡಿತ
 	ಸು. 1584. ಚೆನ್ನಬಸವಪುರಾಣ ಎಂಬ ಕಾವ್ಯದ ಕರ್ತೃ. ಇವನು ವಿಜಯನಗರದ ಹಿರಿಯಮಠದ ಪಟ್ಟಾಧ್ಯಕ್ಷ ನಾಗಿದ್ದನೆಂದು ತೋರುತ್ತದೆ. ವಿಜಯನಗರದ ಮಳೆಯ ಮಲ್ಲೇಶ ಪರಂಪರೆಗೆ ಸೇರಿದ ಸಿದ್ಧವೀರೇಶ ಇವನ ಗುರು. ಹಂಪೆಯ ವಿರೂಪಾಕ್ಷ ಇವನ ಇಷ್ಟದೈವ. ಈತ ತನ್ನನ್ನು ಸಕಲಾಗಮಪುರಾಣಕೋವಿದ, ಸರಸಕರ್ಣಾಟಾದಿಭಾಷಾವಿಶಾರದ, ವರಕವಿಪ್ರಕರಮಾನಸರಾಜಹಂಸ, ನೂತನಪಂಡಿತಾರಾಧ್ಯ ಎಂದು ಮುಂತಾಗಿ ವಿಶೇಷಿಸಿಕೊಂಡಿದ್ದಾನೆ. ಪೂರ್ವಕವಿಗಳಲ್ಲಿ ರಾಘವಾಂಕ, ಹರಿಹರ ಮಗ್ಗೆಯ ಮಾಯಿದೇವ, ಚಾಮರಸ, ಶಂಕರ, ಕೆರೆಯ ಪದ್ಮರಸ ಮೊದಲಾದ ವೀರಶೈವ ಕವಿಗಳನ್ನು ಸ್ತುತಿಸಿದ್ದಾನೆ. ಪುರಾತನರಲ್ಲಿ ಪ್ರಭುದೇವನಿಂದ ಕಿನ್ನರಿ ಬೊಮ್ಮಯ್ಯ ನವರೆಗೆ ಸ್ಮರಿಸಿದ್ದಾನೆ.

	ಬಸವ ಮೊದಲಾದ ಶಿವಶರಣರ ಕಥೆಗಳನ್ನು ಹಿಂದಿನ ಕವಿಗಳು ಬರೆದಿರುವರು. ಆದರೆ ಚೆನ್ನಬಸವನ್ನು ಕುರಿತು ಯಾರೂ ಕಾವ್ಯ ರಚಿಸಿಲ್ಲ. ಆದ್ದರಿಂದ ನೀನು ಅದನ್ನು ಬರೆ ಎಂದು ಶಿವಭಕ್ತ ಸಂಕುಲ ಪ್ರಾರ್ಥಿಸಿ ಕೊಂಡದ್ದರಿಂದ ತಾನು ಕಾವ್ಯ ಬರೆಯಲು ತೊಡಗಿದಂತೆ ಹೇಳಿಕೊಂಡಿದ್ದಾನೆ.

	ಚೆನ್ನಬಸವಪುರಾಣ ವಾರ್ಧಕ ಷಟ್ಪದಿಯಲ್ಲಿದೆ. ಇದರಲ್ಲಿ 5 ಕಾಂಡಗಳೂ 63 ಸಂಧಿಗಳೂ 2,906 ಪದ್ಯಗಳೂ ಇವೆ. ಬಸವಣ್ಣನವರ ಸೋದರಿ ನಾಗಲಾಂಬಿಕೆಯ ಪುತ್ರ ಚೆನ್ನಬಸವಣ್ಣನ ಚರಿತೆ ಕಾವ್ಯವಸ್ತು. ಮೊದಲನೆಯ ಕಾಂಡದಲ್ಲಿ ಚೆನ್ನಬಸವನ ಜನನ, ಬಾಲ್ಯ, ಪ್ರೌಢಾದಿ ಅವಸ್ಥೆಗಳೂ ಎರಡು, ಮೂರು ಮತ್ತು ನಾಲ್ಕನೆಯ ಕಾಂಡಗಳಲ್ಲಿ ಪರಶಿವನ ಪಂಚವಿಂಶತಿ ಲೀಲೆಗಳೂ ವರ್ಣಿತವಾಗಿವೆ. ಐದನೆಯ ಕಾಂಡದಲ್ಲಿ ವೀರಶೈವ ಮತತತ್ತ್ವ, 63 ಪುರಾತನರು, 770 ಗಣಂಗಳು ಮತ್ತು 101 ವಿರಕ್ತರ ವರ್ಣನೆಗಳು ಮತ್ತು ಆನೆಗೊಂದಿ ವಿಜಯನಗರದ ರಾಜ್ಯಸ್ಥಿತಿಗತಿಗಳ ಸೂಕ್ಷ್ಮ ಪರಿಚಯ ಮೊದಲಾದ ವಿಷಯಗಳು ಪ್ರತಿಪಾದಿತವಾಗಿವೆ. ಮಹಾಕಾವ್ಯ ಲಕ್ಷಣಗಳೆನಿಸಿದ 18 ವರ್ಣನೆಗ ಳಿಂದಲೂ ಛಂದಸ್ಸು, ಅಲಂಕಾರ ರಸಗಳಿಂದಲೂ ಈ ಕಾವ್ಯ ಬಂಧುರವೂ ಲಲಿತವೂ ಆಗಿದೆ. ವಸಂತವರ್ಣನೆ, ಗಿರಿಜಾ ಪರಿಣಯ, ಸೂರ್ಯಾಸ್ತ, ಚಂದ್ರೋದಯ, ರತಿಪ್ರಲಾಪ ಮೊದಲಾದ ವರ್ಣನೆಗಳು ಮನೋಹರ ವಾಗಿವೆ. ಈ ಕಾವ್ಯಕ್ಕೂ ಲಕ್ಷ್ಮೀಶನ ಜೈಮಿನಿ ಭಾರತಕ್ಕೂ ಅನೇಕ ಹೋಲಿಕೆಗಳಿವೆಯಾದರೂ ಇವರಿಬ್ಬರಲ್ಲಿ ಯಾರು ಮೊದಲಿಗರು ಎಂಬ ಬಗ್ಗೆ ಪಂಡಿತರಲ್ಲಿ ಭಿನ್ನಾಭಿಪ್ರಾಯವಿದೆ. ಕವಿಯ ಕಾಲಕ್ಕೆ ಹಿಂದೆ ಇದ್ದ ವೀರಶೈವ ಪುರಾತನರ ಮತ್ತು ಕವಿಗಳ ಕಾಲನಿರ್ಣಯಕ್ಕೆ ಈ ಗ್ರಂಥ ಸಾಕಷ್ಟು ಸಹಾಯಕವಾಗಿದೆ. ಕನ್ನಡದ ಷಟ್ಪದಿ ಕಾವ್ಯಗಳಲ್ಲಿ ಈ ಕಾವ್ಯಕ್ಕೆ ಉನ್ನತ ಸ್ಥಾನ ಸಲ್ಲುತ್ತದೆ.
										(ಎಮ್.ಜಿ.ಎನ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ